ಕಾಲ್ನಡಿಗೆಯಲ್ಲೇ ಬೆಂಗಳೂರಿನಿಂದ ಗದಗ ತಲುಪಿದ ವ್ಯಕ್ತಿ.. ಉಪಚರಿಸಿ ಊರಿಗೆ ಕಳುಹಿಸಿದ ಪೊಲೀಸ್‌!

ಕಾಲ್ನಡಿಗೆಯಲ್ಲೇ ಬೆಂಗಳೂರಿನಿಂದ ಗದಗ ತಲುಪಿದ ವ್ಯಕ್ತಿ.. ಉಪಚರಿಸಿ ಊರಿಗೆ ಕಳುಹಿಸಿದ ಪೊಲೀಸ್‌!

ಲಾಕ್‌ಡೌನ್‌ನಿಂದ ಜನ ತತ್ತರಿಸಿ ಹೋಗಿದ್ದಾರೆ. ಎಷ್ಟೋ ಜನ ಎಲ್ಲೆಲ್ಲೋ ಸಿಕ್ಕಿ ನರಕಯಾತನೆ ಅನುಭವಿಸ್ತಿದ್ದಾರೆ. ಕೂಲಿ ಕಾರ್ಮಿಕರು, ನಿರ್ಗತಿಕರು ಊರಿಗೆ ಹೋಗೋಕು ಆಗ್ದೇ, ಊಟಕ್ಕೂ ಗತಿ ಇಲ್ಲದೇ ಪರದಾಡುತ್ತಿದೆ. ಅಲ್ಲದೇ ಹೇಗಾದ್ರೂ ಮಾಡಿ ಊರು ಸೇರ್ಬೇಕು ಅಂತಾ ಏನೇನೋ ದುಸ್ಸಾಹಸಕ್ಕೆ ಕೈ ಹಾಕ್ತಿದ್ದಾರೆ. ಹೀಗೆ ವ್ಯಕ್ತಿಯೊಬ್ಬ ನೂರಾರು ಕಿಲೋ ಮೀಟರ್ ನಡೆದು ಹರಸಾಹಸ ಪಟ್ಟು ಊರು ತಲುಪಿದ್ದಾನೆ.
ಈತ ನಡೆದದ್ದು ಬರೋಬ್ಬರಿ 400 ಕಿಲೋ ಮೀಟರ್!
ಬೆಂಗಳೂರಿನಲ್ಲಿ ಖಾಸಗಿ ಕಂಪನಿಯೊಂದರಲ್ಲಿ ನೌಕರನಾಗಿದ್ದ ವಿಜಯಪುರ ಮೂಲದ ಮಲ್ಲಿಕಾರ್ಜುನ ಗುರುಮಠ ಎಂಬ ವ್ಯಕ್ತಿ ಕಾಲ್ನಡಿಗೆಯಲ್ಲೇ ಊರು ಸೇರಿ ಅಚ್ಚರಿ ಮೂಡಿಸಿದ್ದಾನೆ. ಮೂರು ದಿನಗಳ ಕಾಲ ಕಾಲ್ನಡಿಗೆಯಿಂದಲೇ ಬರೋಬ್ಬರಿ 400 ಕಿಮೀ ನಡೆದುಕೊಂಡೇ ಗದಗ ಜಿಲ್ಲೆಯ ಮುಂಡರಗಿ ಪಟ್ಟಣ ತಲುಪಿದ್ದಾನೆ.‌ ಕೊರೊನಾ ಲಾಕ್‌ಡೌನ್‌ನಿಂದ ಬೆಂಗಳೂರಿನಿಂದ ವಿಜಯಪುರಕ್ಕೆ ಮಲ್ಲಿಕಾರ್ಜುನ ಹೊರಟಿದ್ದ.
ಆದ್ರೆ, ಈತನಿಗೆ ಯಾವುದೇ ವಾಹನಗಳು ಸಿಗದೇ ಪರದಾಡಿದ್ದ. ಕೊನೆಗೆ ಹೇಗಾದ್ರು ಮಾಡಿ ಊರು ಸೇರಲೇ ಬೇಕು ಅಂತಾ ಕಾಲು ನಡಿಗೆಯಿಂದಲೇ ಪ್ರಯಾಣ ಆರಂಭಿಸಿದ್ದ.
ಇತ್ತ ಈತನ ಬಗ್ಗೆ ಸುಳಿವು ಸಿಗದ ಹಿನ್ನೆಲೆಯಲ್ಲಿ ಬೆಂಗಳೂರಿನ ಸುಬ್ರಮಣ್ಯ ನಗರ ಪೊಲೀಸ್ ಠಾಣೆಯಲ್ಲಿ ಈತ ಕಾಣೆಯಾಗಿದ್ದಾನೆ ಅಂತ ಸಹೋದ್ಯೋಗಿಗಳು ದೂರು ದಾಖಲಿಸಿದ್ದರು.‌ ಆದ್ರೆ, ಈತ ಊರ ಕಡೆ ಪ್ರಯಾಣ ಬೆಳೆಸಿದ್ದ. ಹೀಗೆ ಈ ವ್ಯಕ್ತಿ ಮುಂಡರಗಿ ಪಟ್ಟಣದಲ್ಲಿ ಪ್ರತ್ಯಕ್ಷವಾಗಿದ್ದು, ಪೊಲೀಸರೇ ಈತನನ್ನ ಉಪಚರಿಸಿದ್ದಾರೆ. ಕಾಲ್ನಡಿಗೆಯಿಂದ ತುಂಬಾ ಆಯಾಸವಾಗಿ ಮಾನಸಿಕವಾಗಿ ‌ಬಳಲಿದ್ದ ಈತನಿಗೆ ಗದಗ ಪೊಲೀಸರೇ ಉಪಚಾರ ಮಾಡಿ ಆಸ್ಪತ್ರೆಗೆ ಕರೆದೊಯ್ದಿದ್ದರು.‌ ಆತನನ್ನ ತಪಾಸಣೆ ಮಾಡಿದಾಗ ಯಾವುದೇ ಸೋಂಕು ಇಲ್ಲದಿರುವುದು ಕಂಡು ಬಂದಿದೆ.‌ ಬಳಿಕ ಪೊಲೀಸರೇ ವಿಜಯಪುರದಲ್ಲಿರುವ ಆತನ ಪೋಷಕರಿಗೆ ವಿಷಯ ತಿಳಿಸಿ ಮರಳಿ ಊರಿಗೆ ಕಳುಹಿಸಿಕೊಟ್ಟಿದ್ದಾರೆ‌. ಪೊಲೀಸರ ಈ ಕಾರ್ಯಕ್ಕೆ ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

0 Comments: